ದಿನಚರಿಗಳು
ಅಂದಂದಿನ ಘಟನೆಗಳ ದಾಖಲೆಗಳಿಗೆ ಈ ಹೆಸರಿದೆ (ಡೈರಿಗಳು). ಬಖೈರು (ಮೆಮ್ವಾರ್) ಇತರರಿಗೂ ಇತರರಿಗೆ ಸಂಬಂಧಿಸಿದ ಘಟನೆಗಳಿಗೂ ದಿನಚರಿಗಿಂತ ಹೆಚ್ಚು ಗಮನ ಕೊಡುತ್ತದೆ. ದೃಷ್ಟಿ ವ್ಯಕ್ತಿಯದೇ ಆದರೂ ಚಾರಿತ್ರಿಕ ನಿರೂಪಣೆಗಳೇ ಅದರಲ್ಲಿ ಪ್ರಾಧಾನ್ಯ. ಕುಶಲಪತ್ರ (ಲೆಟರ್ಸ್) ಕಂಡಹಾಗೆ ಬರೆಹಗಾರ ಓದುವವ ಇಬ್ಬರಿಗೂ ಅಂಟಿಕೊಂಡಿದ್ದು; ಇಬ್ಬರ ನಡುವಣ ಕೊಳುಕೊಡೆ, ರೋಜು ದಾಖಲೆಗೂ (ಜರ್ನಲ್) ದಿನಚರಿಗೂ ವ್ಯತ್ಯಾಸವೇ ಇಲ್ಲವೆಂದು ಅನೇಕರು ಅವನ್ನು ಸಮನಾರ್ಥಕಪದಗಳಂತೆ ಬಳಸುತ್ತಾರೆ. ಎರಡರ ಮೂಲಶಬ್ದಗಳಿಗೂ ದಿವಸ ಎಂಬ ಒಂದೇ ಅರ್ಥ; ಆದರೂ ರೋಜು ದಾಖಲೆಯ ಹಿಂದೆ ಹೆಚ್ಚು ಆಲೋಚನೆಯೂ ಹೆಚ್ಚು ವ್ಯವಧಾನವೂ ಇರುತ್ತವೆ. ದಿನಚರಿಯಾದರೂ ತಕ್ಷಣ ನಡೆಯುವ ವ್ಯವಹಾರ. ಅಂತೂ ಈ ನಾಲ್ಕೂ ಆತ್ಮಕಥೆಯ (ಆಟೊಬಯಾಗ್ರಫಿ) ತುಣುಕುಗಳು

ಕೆಲವು ಜಾಯಮಾನದವರಿಗೂ ಕೆಲವು ವೃತ್ತಿಯವರಿಗೂ ದಿನಚರಿ ಬರೆದಿಡುವುದು ಅನಿವಾರ್ಯವೆಂದು ನಿಷ್ಕರ್ಷಿಸಿದ್ದಾರೆ: i ನಾವಿಕ ಪ್ರವಾಸಿಗ ಯೋಧ ಕ್ರೀಡಾವಿಲಾಸಿ ಪತ್ರಿಕೋದ್ಯಮಿ ಮುಂತಾದವರು. ii ತಮಗೆ ಯಾವುದೋ ಅಪಾಯ ಕಾದಿದೆಯೆಂಬ ಹುಸಿ ಹೆದರಿಕೆಯ ಮನೋರೋಗಿಗಳು : ಸೇಂಟ್ ಸೈಮನ್, ರೊಸೋ, ಮಾರಿಬಾಷ್ಕರ್ಟ್‍ಸೆಫ್, ಇತ್ಯಾದಿ. iii ಹೊಸದಾಗಿ ಮತಾಂತರ ಹೊಂದಿದ ಶ್ರದ್ಧಾಳುಗಳು: ಜಾರ್ಜ್ ಫಾಕ್ಸ್, ನ್ಯೂಮನ್, ಪ್ರಿನ್ಸ್ ಕ್ರೋಪ್ಟೋಕಿನ್ ಇತ್ಯಾದಿ. ಲೇಡಿ ವಾರಿಕ್ ತನ್ನ ದಿನಚರಿಯಲ್ಲಿ ಈ ಟಿಪ್ಪಣಿ ನಮೂದಿಸಿದ್ದಾಳೆ : `ಅರಮನೆಯ ಭೋಜ - ಹಜಾರದಲ್ಲಿ ಇಂದು ವೈಭವ ಪ್ರದರ್ಶನ. ತುತ್ತೂರಿಗಳು ಒಟ್ಟಿಗೆ ಊದಿದವು. ನಾನು ಅಂದುಕೊಂಡೆ; ಈಗ ಅಂತ್ಯಕಾಲದ ಕಹಳೆಯನ್ನು ದೇವರು ದನಿಮಾಡಿಬಿಟ್ಟರೆ ಏನು ಗತಿ!' ಪ್ಯೂರಿಟನ್ ಪಂಗಡದ ವೀರ ಪಂಥಿ, ಆಕೆ. iv ನಟ ನರ್ತಕ ಸಂಗೀತಗಾರ ಕಲಾವಿದ ಮೊದಲಾದವರು: ಬೆನ್ವಿನೂಟೊ ಸೆಲ್ಲೀನಿ, ಗೋಲ್ಡೋನಿ, ಮೈಕಲ್ ಕೆಲ್ಲಿ, ಬರ್ಲಿಯೋಜ್. v ಶ್ರೇಷ್ಠ ಪುರುಷರ ಸಮೀಪವರ್ತಿಗಳಾದ ಆಪ್ತಸಖರು ಕಾರ್ಯದರ್ಶಿಗಳು ಇತ್ಯಾದಿ. ಆದರೆ ಇಂಥವರು ಮಾತ್ರ ದಿನಚರಿ ಇಡಲು ಯೋಗ್ಯರು ಇಂಥವರು ಅಲ್ಲ ಎಂದು ವಿಂಗಡ ಮಾಡುವುದು ವ್ಯರ್ಥ ಉದ್ಯೋಗ. ಮೊಗಲಾಯಿ ಚಕ್ರವರ್ತಿ ಬಾಬರ್, ಇಂಗ್ಲೆಂಡಿನ ದೊರೆ ಆರನೆಯ ಎಡ್ವರ್ಡ್ ಹೇಗೇ ಸ್ವಾರಸ್ಯ ದಿನಚರಿ ಲೇಖಕರೊ ಹಾಗೆಯೇ ಹಳ್ಳಿಯ ಅಂಗಡಿಯೊಂದನ್ನು ನೋಡಿಕೊಳ್ಳುತ್ತಿದ್ದ ರಾಜರ್‍ಲೊ, ಇನ್ನೊಂದು ಅಂಗಡಿಯ ಮಾಲೀಕ ತಾಮಸ್ ಟರ್ನರ್ ಕೂಡ ಗಮನಾರ್ಹರು. 1550ರ ಮೇ 25: ಒಬ್ಬ ಮನುಷ್ಯ ಮದುವೆಯ ನೆವದಲ್ಲಿ ಜನರ ಗುಂಪು ಸೇರಿಸಿ ದಂಗೆ ಎಬ್ಬಿಸಲು ಯೋಚಿಸಿದ; ಅಧಿಕಾರಿಗಳು ಅವನನ್ನು ದಸ್ತಗಿರಿ ಮಾಡಿ ಶಿಕ್ಷೆಗೆ ಗುರಿಮಾಡಿದರು. ಇದು ಎಡ್ವರ್ಡ್‍ನ ಲಿಖಿತ. 1664ರ ಮೇ 6: ಇಂದು ಅಂಗಡಿ ತನಿಖೆಗೆ ಜಾನ್ ಚಾಡಕ್ ಬಂದ; ಅವನಿಗೆ ಏನು ಅತೃಪ್ತಿ ಆಗುತ್ತದೊ ಎಂದು ನಾನು ಹೆದರಿದ್ದೆ. ಲೆಕ್ಕಚಾರದ ಪರೀಕ್ಷೆ ಮುಗಿದ ಮೇಲೆ ನಾವು ಭೇಟೆಗೆ ಹೋದೆವು... ದೇವರ ಕೃಪೆಯಿಂದ ನನ್ನ ಪ್ರಯತ್ನದ ಫಲವಾಗಿ ದಣಿಗೆ 21-1-5 ಪೌಂಡು ಕಾಲುಚೀಲ ಕೊಡಿಸುವುದಾಗಿ ತಿಳಿಸಿದ. ದೇವರ ದಯೆ, ನನ್ನ ಭಯ ಹೋಗಿ ಸಂತೋಷ ಉಕ್ಕಿತು - ಇದು ರಾಜರ್ ಲೊ ಬರೆದದ್ದು. ಎರಡರಲ್ಲೂ ಮಾನವತೆಯ ಸೊಗಡಿದೆ.

ಉದ್ದೇಶಶೂನ್ಯ ವ್ಯಾಪಾರ ಪ್ರಾಯಶಃ ಮಾನವ ಪ್ರಕೃತಿಗೆ ವಿರುದ್ಧ. ದಿನಚರಿ ಬರೆದಿಡುವುದೂ ಯಾವುದೋ ಅಪೇಕ್ಷೆಯನ್ನು ಕೈಗೂಡಿಸಿಕೊಳ್ಳುವುದಕ್ಕೆ ಫ್ಯಾನಿ ಬರ್ಸಿ ಹದಿನೈದು ವರ್ಷದ ಬಾಲಕಿಯಾಗಿದ್ದಾಗ ದಿನಚರಿ ಪ್ರಾರಂಭಿಸಿದಳು. `ಇಲ್ಲದವನಿಗೆ (ಟು ನೋಬಡಿ) ಅದನ್ನು ಅರ್ಪಿಸಿದಳು; `ಏತಕ್ಕೆಂದರೆ ಇಲ್ಲದವನಿಗೆ ನನ್ನ ಪ್ರತಿಯೊಂದು ಭಾವನೆಯನ್ನೂ ತಿಳಿಸಬಲ್ಲೆ; ಇಲ್ಲದವನಿಂದ ಮುಚ್ಚಿಡತಕ್ಕ ಗುಟ್ಟು ಒಂದೂ ಇಲ್ಲ; ಇಲ್ಲದವನನ್ನು ಕಂಡು ನನಗೆ ಯಾವ ಭೀತಿಯೂ ಇಲ್ಲ. ಹೀಗೆಂದ ಅವಳಿಗೆ ತಾನು ಬರೆದದ್ದನ್ನು ಆಲಿಸುವುದಕ್ಕೆ ತನ್ನ ಸುತ್ತಣ ಒಂದು ಚಿಕ್ಕ ಗೆಳೆಯರ ಗೋಷ್ಠಿ ಬೇಕಾಯಿತು ಬಂಧುಬಾಂಧವರೊ ಇಷ್ಟಮಿತ್ರರೊ ದೂರದ ಇತರ ಮಂದಿಯೊ ತನ್ನ ಸ್ವಕೀಯ ಅನುಭವದ ವಿವರಗಳನ್ನು ತಿಳಿದುಕೊಳ್ಳಲಿ ಎಂಬ ಅಭಿಲಾಷೆ ವ್ಯಕ್ತವಾಗಿಯೊ ಅವ್ಯಕ್ತವಾಗಿಯೊ ದಿನಚರಿಕರ್ತನನ್ನು ನಡೆಸಿದಲ್ಲಿ ಅದೇನೂ ಆಯುಕ್ತವಲ್ಲ. ಅದು ಒಂದು ಬಗೆಯ ಸ್ವಾರ್ಥ ಅಥವಾ ಅಹಂಕಾರವಾದರೂ ಕ್ಷಮ್ಯ. ii ಲೋಕದ ವಿದ್ಯಮಾನಗಳನ್ನು ಕುರಿತು ನಿಜಾಂಶ ದಾಖಲಿಸುವ ಇಚ್ಚೆಯೂ ಕೆಲವರನ್ನು ದಿನಚರಿಗೆ ಸೆಳೆಯುತ್ತದೆ. ಘಟನಾವಳಿಗಳಲ್ಲಿ ಅವರಿಗೂ ಅಷ್ಟಿಷ್ಟು ಜವಾಬ್ದಾರಿ ಇದ್ದರೆ ಅವರ ವರದಿಯಿಂದ ಉಪಯೋಗವುಂಟು. ಇಲ್ಲದಿದ್ದರೂ ಘಟನೆಗಳ ನಿರೂಪಣೆಯೇ ಸಾಕು. ಜಾನ್ ಬಫ್ಟನ್ ಹೀಗೆ ಬರೆದಿದ್ದಾನೆ : `1699, ಜುಲೈ 13; ವಿಧವೆ ಕಾಮನ್‍ಳನ್ನು ಮಾಟಗಾತಿಯೆಂದು ಬಗೆದು ಹೊಳೆಗೆ ಹಾಕಲಾಯಿತು. ಅವಳು ಮುಳುಗಲಿಲ್ಲ, ತೇಲಿದಳು. ಜುಲೈ 19: ಅವಳನ್ನು ಪುನಃ ಹೊಳೆಗೆ ಎಸೆದರು. ಪುನಃ ಅವಳು ತೇಲಿದಳು. 24: ಮೂರನೆಯ ಬಾರಿ ಎಸೆದರು. ಮುಳುಗದೆ ತೇಲಿದಳು. ಡಿಸೆಂಬರ್ 27:" ವಿಧವೆ ಕಾಮನ್‍ಳನ್ನು ಮಾಟಗಾತಿಯೆಂದು ಹೂಳಿಬಿಟ್ಟರು.' ನಿಸರ್ಗದ ಅಧ್ಯಯದಲ್ಲಿ ಹೆಸರಾಂತ ಗಿಲ್ಬರ್ಟ್ ಹ್ವೈಟ್ ಹೀಗೆ ಟಿಪ್ಪಣಿಸಿದ್ದಾನೆ : `1768 ಸೆಪ್ಟೆಂಬರ್ 8: ವಿಪರೀತ ಮಳೆ. ಮಾರ್ಟಿನ್ ಹಕ್ಕಿಗಳು ತಮ್ಮ ಗೂಡುಗಳಲ್ಲಿ, ಗೋದಿ ಕೊಯ್ಲಿಗೆ ಸಿದ್ಧವಾಗಿಲ್ಲ. ಗುಡುಗು. 1769 ಡಿಸೆಂಬರ್ 25: ಸೋನೆಯ ಮಂಕು ದಿವಸ. ತ್ರಷ್ ಪಕ್ಷಿ ಹಾಡಿತು. 1773 ಏಪ್ರಿಲ್ 20 : ವಿಲೊ ಜೊಂಡಿನ್ ರೆನ್ ಹಕ್ಕಿ ಹಾಡಿತು; ದುಗುಡದ ದನಿ. ಕೆಲವರು ಅದನ್ನು ಹರ್ಷದನಿ ಎನ್ನುತ್ತಾರೆ. ಚಿಕ್ಕ ಭಾರದ್ವಾಜ ಹಾರುವಾಗಲೂ ಹಾಡುತ್ತದೆ. ಹಸಲೆಯ ಮೇಲೆ ನಡೆಯುವಾಗಲೂ ಹಾಡುತ್ತದೆ.' iii) ತಮಗೆ ಯಾವ ಕಾರ್ಯಕ್ರಮ ಉಲ್ಲಾಸಕರವೂ ಪ್ರಯೋಜನಕರವೂ ಆಯಿತೋ ಅದನ್ನು ಇತರರಿಗೆ ಶಿಫಾರಸು ಮಾಡುವುದಕ್ಕಾಗಿ ದಿನಚರಿ ಪ್ರಕಟಿಸಬಹುದು. ಸೀಲಿಯ ಫೀಯೆನ್ಸ್ ಆಶ್ವಾರೋಹಿಯಾಗಿ ಅನೇಕ ಕಡೆ ಸಂಚರಿಸಿದಳು. ಇಂಗ್ಲಿಷ್ ಜನ ಯುರೋಪಿಗೆ ಪ್ರವಾಸ ಹೋಗಬೇಕಾದ್ದಿಲ್ಲ, ತಮ್ಮ ನಾಡಿನಲ್ಲೇ ಸಂತೃಪ್ತಿ ಪಡೆದುಕೊಳ್ಳುವುದು ಸಾಧ್ಯ ಎಂಬ ತತ್ತ್ವವನ್ನು ಜಾಹೀರಾತು ಮಾಡುವುದಕ್ಕೋಸ್ಕರ ದಿನಚರಿಯನ್ನು ಸರಾಗವಾಗಿ ಬರೆದಳು. ಎಲ್ಲೂ ತಾರೀಖನ್ನು ನಮೂದಿಸಿಲ್ಲ. iv) ಹಣ ಸಂಪಾದನೆಗಾಗಿ ರೋಜುದಾಖಲೆ ದಿನಚರಿಗಳನನ್ನು ಬರೆದವರೂ ಇದ್ದಾರೆ. ಪ್ರಸಿದ್ಧ ಕಾದಂಬರಿಕಾರ ಹೆನ್ರಿ ಫೀಲ್ಡಿಂಗ್ ಯಾವಾಗಲೂ ಬಡವ. ಕೊನೆಯಲ್ಲಿ ಕಡು ರೋಗಗ್ರಸ್ತನಾಗಿ ಲಿಸ್ಟನ್ನಿಗೆ ತರೆಳಬೇಕಾಯಿತು. ಹೆಂಡತಿ ಮಕ್ಕಳಿಗೆ ನೆರವಾಗಲಿ ಎಂದು ಸಮುದ್ರಯಾನದ ವಿವರಗಳನ್ನು ದಿನಚರಿಯಾಗಿ ರಚಿಸಿಕೊಡಲು ಒಪ್ಪಿಕೊಂಡ. ಅದು ಒಳ್ಳೆಯ ಸಾಹಿತ್ಯವೂ ಆಯಿತು. ಡಾಕ್ಟರ್ ಜಾನ್ಸನ್ ಈ ಸೂತ್ರ ಉಚ್ಛರಿಸಿದ : `ಪೆದ್ದನ ಹೊರತು ಮಿಕ್ಕ ಯಾವೊಬ್ಬನೂ ದುಡ್ಡಿಗಲ್ಲದೆ ಬರೆಯುವುದಿಲ್ಲ.' ದುಡ್ಡಿಗೋಸ್ಕರವೇ ಬರೆದದ್ದು ಎಂದು ಹೇಳಿಕೊಳ್ಳುವುದೇ ಬರೆಹಗಾರನ ಋಜುತ್ವಕ್ಕೆ ಸಾಕ್ಷ್ಯ! ಪಾಪ ಪಶ್ಚಾತ್ತಾಪ ಪ್ರಾಯಶ್ಚಿತ್ತ ಸುಧಾರಣೆಗಳಿಗೆ ಸಂಬಂಧಿಸಿದ ದಿನಚರಿಯೂ ಸಾಕಷ್ಟಿದೆ. ಸಂತ ಆಗಸ್ಟೀನನ `ತಪ್ಪೊಪ್ಪಿಗೆ ಸುಪ್ರಸಿದ್ಧವಾದ ಪುಸ್ತಕ; ನಡೆನುಡಿಯಲ್ಲಿ ಹಲವು ದೋಪಗಳು ಇದ್ದದ್ದು ಆಮೇಲೆ ಅವನ್ನು ಕಳೆದುಕೊಂಡದ್ದೂ ಆ ಪುಸ್ತಕದ ವಿಷಯ. ರೂಸೋನ `ತಪ್ಪೊಪ್ಪಿಗೆಯ ಆಶೆಯ ಬೇರೆ, ಪರಿಣಾಮ ಬೇರೆ. ತನ್ನ ಕಷ್ಟ ಕಾರ್ಪಣ್ಯಕ್ಕೆ ತನ್ನ ವಕ್ರತೆಯೂ ಸಡಿಲ ಶೀಲವೂ ಮುಖ್ಯ ಕಾರಣವೆಂಬುದನ್ನು ಒಪ್ಪದೆ, ಇತರರ ಮಾತ್ಸರ್ಯ ಪಿತೂರಿಗಳ ಕಡೆಗೆ ಬೆರಳು ತೋರಿಸುವುದು, ತನ್ಮೂಲಕ ಸ್ವಸಮರ್ಥತೆಯನ್ನು ಸಾಧಿಸುವುದು ಅವನ ಪ್ರಯತ್ನ. ಅದೂ ಅಲ್ಲದೆ ಅನೃತ, ಅತಿಶಯ, ಆತ್ಮವಂಚನೆಗಳಿಂದ ತುಂಬಿಕೊಂಡಿದೆ, ಅವನ ಲೇಖನ. ತಮ್ಮ ತಮ್ಮ ಅಂತರ್ಯವೇ ಆದರೂ ಅದು ಕೆಲವರಿಗೆ ಬಿಡಿಸಲಾಗದ ಸಮಸ್ಯೆ. ಆನ್ರಿ-ಫ್ರೆಡರಿಕ್ ಏಮೈಲ್ ದಿನಚರಿ ಪ್ರಾರಂಭಿಸಿದಾಗ ಈ ವಾಕ್ಯವನ್ನಾಡಿದ. `ನಾನು ಅಸ್ವತಂತ್ರ ಏತಕ್ಕೆಂದರೆ ನನ್ನ ಇಚ್ಛೆಯನ್ನು ಕಾರ್ಯರೂಪಕ್ಕೆ ತರುವ ಶಕ್ತಿ ನನಗಿಲ್ಲ. ಮೂವತ್ತು ವರ್ಷ ಒಂದೇ ಸಮನೆ ಅವಲೋಕನ ಪರೀಕ್ಷೆ ವಿಶ್ಲೇಷಣೆಗಳನ್ನು ಮುತುವರ್ಜಿಯಿಂದ ನಡೆಸಿಕೊಂಡರೂ ಸೋತಿ ಹೋಗಿ ಕೊನೆಗೆ ಹೀಗೆ ಬಿಸುಸುಯ್ದು; `ಕೆಲಸ ಮಾಡುವುದೆಂದರೆ ನನಗೆ ಚಿತ್ರಹಿಂಸೆ. ನನ್ನ ಜೀವನ ಹರಿಯುತ್ತಿರುವುದು ಗಾಯದಿಂದ ನೆತ್ತರು ಹರಿಯುತ್ತಿರುವಂತೆ ಎಂದು ತೋರುತ್ತಿದೆ ಹಾಗಿದ್ದರೂ ಸೂಕ್ಷ್ಮ ಬುದ್ಧಿಚಾತುರ್ಯ ಅವನ ದಿನಚರಿಯಲ್ಲಿ ಗೋಚರಿಸುತ್ತದೆ. ಸ್ಟೀವನ್ಸ್‍ನ್ ಒಮ್ಮೆ ಹೀಗೆ ಒಪ್ಪಿಕೊಂಡ; `ಆತ್ಮ ಚರಿತೆಯನ್ನು ನಾನು ಬರೆದಿದ್ದ ಪಕ್ಷದಲ್ಲಿ ಹೆತ್ತ ತಾಯಿ ನನ್ನನ್ನು ಗುರುತಿಸುತ್ತಿರಲಿಲ್ಲ.' vii) ನಾನೆಷ್ಟು ಚೆನ್ನಾಗಿ ಬರೆಯಬಲ್ಲೆ ಎಂಬ ಸೊಕ್ಕಿನಿಂದಲೂ ನನ್ನ ಸಮಾನರುಂಟೆ, ಎಷ್ಟು ವೈವಿಧ್ಯದ ಬದುಕು ನನ್ನದು ಎಂಬ ಬಿಗುಮಾನದಿಂದಲೂ ದಿನಚರಿಗೆ ಕೈಹಾಕುವವರು ಇಲ್ಲದಿಲ್ಲ. ಅವರಿಗೆ ಸಲ್ಲುವ ಪ್ರತಿಫಲವೆಂದರೆ ಲೋಕದ ತಿರಸ್ಕಾರ ಇಲ್ಲವೇ ತಾತ್ಸಾರ.

ದಿನಚರಿಯನ್ನು ಬರೆದಿಡುವುದು ಬಹಳ ಸುಲಭವೂ ಸರಸವೂ ಆದ ಕೆಲಸವಾಗಿ ತೋರಬಹುದು. ಆದರೆ ಅದರ ದಾರಿ ಸುಗಮವಲ್ಲ; ಮುಗ್ಗರಿಸಿ ಬಿಡುವ ಕುಳಿಗೆ ಬೀಳುವ ನಗೆಪಾಟಲಾಗುವ ಅಪಾಯ ಯಥೇಷ್ಟವಾಗಿದೆ. (1) ಅಗತ್ಯವಾಗಿ ತಿಳಿಸಬೇಕಾದ್ದನ್ನು ತಿಳಿಸದೇ ಬಚ್ಚಿಡುವಿಕೆ. ಮಿಲ್, ಗಿಬನ್ ಮೊದಲಾದವರು ಇನ್ನೂ ಕೆಲವು ವಿವರಗಳನ್ನು ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. (2) ಅತ್ಯಲ್ಪ ಸಂಗತಿಗಳಿಗೂ ಜಾಗವಿತ್ತು ಯುಕ್ತಪ್ರಮಾಣದ ಮರ್ಯಾದೆಗೆ ಭಂಗತರುವಿಕೆ. ಇದು ಅನೇಕ ದಿನಚರಿಕಾರರಿಗೆ ಅಡಸುವ ಸಾಮಾನ್ಯ ಜಾಡ್ಯ. ದಿನಚರಿಯ ಶರೋರತ್ನ ಪೀಪಿಸ್ ಕೂಡ ಅದರಿಂದ ಬಿಡುಗಡೆ ಹೊಂದಲಿಲ್ಲ. (3) ತೇಸಿ ಸ್ಥಳ ನಾಮಾಂಕಿತ ಮುಂತಾದವುಗಳಲ್ಲಿ ತೋರುವ ಭ್ರಾಂತಿ ಅಥವಾ ತಪ್ಪು. ಇದು ಸಾಮಾನ್ಯವಾಗಿ ಮನ್ನಿಸಲರ್ಹವಾದ ಸಣ್ಣ ದೋಷ. ಕೆಲವು ಸಾರಿ ಅಪರಾಧವಾದರೂ ಆಗಬಹುದು. ಲೇಖಕ ಎಷ್ಟು ಎಚ್ಚರಿಕೆ ಬೇಕೊ ಅಷ್ಟನ್ನೂ ತೆಗೆದುಕೊಳ್ಳತಕ್ಕದ್ದು. (4) ನಾನಾ ವಿವರಗಳನ್ನು ಕ್ರಮಬಿಟ್ಟು ಸೇರಿಸಿ ಗೊಂದಲಗೊಳಿಸುವುದು. ಗಯಟೆ ಹಲವು ಸಾರಿ ಓದುಗರನ್ನು ತಬ್ಬಿಬ್ಬುಗೊಳಿಸುತ್ತಾನೆ. (5) ಮಾತುಕಥೆಯ ನೇರ ನಿರಾಡಂಬರ ಶೈಲಿಯನ್ನು ಬಿಟ್ಟು ಗ್ರಾಂಥಿಕ ಶೈಲಿಯನ್ನು ಬಳಸುವಿಕೆ, ಹಾಗೂ ಉಪದೇಶ ಮಾಡುವ ಛಲ. (6) ಹೇಳಿದ್ದನ್ನೇ ಹೇಳುವ ನೀರಸತೆ; ವೈವಿಧ್ಯ ಸಾಧಿಸದಿರುವಿಕೆ. ಎಂದರೆ, ದಿನಚರಿಯಲ್ಲಿ ಅಷ್ಟೊ ಇಷ್ಟೊ ಚರ್ವಿತಚರ್ವಣ ಅನಿವಾರ್ಯ; ಅದು ನ್ಯೂನತೆಯಾಗಲಾರದು. ಆದರೆ ಅದು ಅತಿಯಾಗಬಾರದು.

ದಿನಚರಿಯನ್ನು ಯಾರು ಬೇಕಾದರೂ ಬರೆದಿಡಬಹುದು; ಅದು ಕೆಲವು ವಿಶಿಷ್ಟ ಗುಣಗಳಿಂದ ಕೂಡಿಕೊಂಡಿದ್ದರೆ ಮಾತ್ರ ಸ್ವೀಕರಣೀಯ ಸಾಹಿತ್ಯವಾಗುತ್ತದೆ, ಬಹುಕಾಲ ಜೀವಂತವಾಗಿರುತ್ತದೆ, ಆಹ್ಲಾದ ಪ್ರಯೋಜನ ಎರಡನ್ನೂ ಒದಗಿಸುತ್ತದೆ. ಸಾಮಾಜಿಕ ಜೀವಿಯಾಗಿರಬೇಕಾದ ಮನುಷ್ಯಪ್ರಾಣಿಗೆ ಪ್ರಜ್ಞೆ ಸದಾ ಅತ್ಯಾವಶ್ಯಕ; ಆದರೆ ಅದು ಸ್ವಪ್ರಜ್ಞೆಗೆ ಅಥವಾ ತನ್ನರಿವಿಗೆ ತಿರುಗಿ ಪ್ರಬಲಗೊಂಡರೆ ಒಳ್ಳೆಯದಲ್ಲ. ತಾನು ತನ್ನ ಸುಖದುಃಖ ತನ್ನ ಕೀರ್ತಿ ಇತ್ಯಾದಿಯನ್ನು ಇತರರ ಮುಂದೆ ಪ್ರದರ್ಶಿಸುವ ಹಂಬಲಿಕೆ ಬೆಳೆಯುತ್ತದೆ. ಪರಿಣಾಮವಾಗಿ ಇತರರಿಗೆ ಬೇಸರ. ದಿನಚರಿಕಾರ ತನ್ನ ಆಗುಹೋಗುಗಳನ್ನೇ ದಾಖಲಿಸಿದರೂ ಅದು ತನ್ನರಿವಿನಿಂದ ವಿಮೋಚನೆ ಪಡೆದ ಬರೆಹ ಆಗಬೇಕು. ನಿರ್ಲಿಪ್ತತೆ ಅದರ ಲಾಂಛನ. 'ಇಂದು ಸುವಾಸನೆ ಕಲ್ಲಂಗಡಿ ತಿಂದೆ, ಈ ವರ್ಷ ಅದೇ ಮೊದಲ ಬಾರಿ.' ಈ ದಿವಸ ನನ್ನ ನಡುಮನೆಯ ಚಿನ್ನದ ಬಣ್ಣ ಬಳಿದರು. ಅದರಿಂದ ನನಗೆ ತುಂಬ ಸಂತೋಷವಾಯಿತು.' `ಊಟಕ್ಕೆ ಕುಳಿತಾಗ ಸಾಸಿವೆ ಇರಲಿಲ್ಲ. ಕೊಂಡು ಬಾ ಎಂದು ಹುಡುಗನನ್ನು ಕಳಿಸಿದೆ; ಅವನು ಹರ್ಷಬೆಂಕಿಯನ್ನು ನೋಡುತ್ತ ಬೀದಿಯಲ್ಲಿ ನಿಂತು ಅರ್ಧ ಘಂಟೆ ತಡಮಾಡಿದ. ನಾಳೆ ಅವನನ್ನು ದಂಡಿಸುತ್ತೇನೆ ... (ಮಾರನೇ ದಿನ) ಈ ಹೊತ್ತು ಹುಡಗನಿಗೆ ಏಟು ಕೊಟ್ಟೆ, ನನ್ನ ಕೈ ಸುಸ್ತು ಬೀಳುವಷ್ಟು: ಪೀಪಿಸ್ಸನ ಇಂಥ ವಾಕ್ಯಗಳನ್ನು ಓದಿ ನಾವು ಮಕ್ಕಳಂತೆ ನಲಿಯಬೇಕು. ಅವನ್ನು ನೀನೇತಕ್ಕೆ ಬರೆದೆ ಎಂದು ಕೇಳುವುದಿಲ್ಲ; ಕೇಳಿದರೆ ಅವನಿಂದ ಖಚಿತ ಜವಾಬು ಬರುವಂತಿಲ್ಲ. ಲಿಲಿತ ಸುಂದರೆ ವ್ಯಕ್ತಿಯೊಬ್ಬನ ಆತ್ಮೀಯ ಪರಿಚಯ ಅಲ್ಲೆಲ್ಲ ನಮಗಾಗುತ್ತದೆ. ದಿನಚರಿಯಿಂದ ಒದಗುವ ಲಾಭಗಳಲ್ಲಿ ಅದೇ ಅಮೂಲ್ಯವಾದದ್ದು. ದಿನಚರಿಕಾರನ ಅವಧಿಯ ಸಾಮಾಜಿಕ ಧಾರ್ಮಿಕ ರಾಜಕೀಯ ಪರಿe್ಞÁನವೂ ನಮಗೆ ದೊರಕುತ್ತದೆ; ತಿಳಿದಿರುವ ಸಂಗತಿಗಳ ಸತ್ಯಾಂಶ ಮಿಥ್ಯಾಂಶ ಸ್ಥಿರಗೊಳ್ಳುತ್ತದೆ. ಚರಿತ್ರೆಗಳಲ್ಲಿ ಸಿಕ್ಕಲಾರದ ನೂರಾರು ಸ್ವಾರಸ್ಯಯುಕ್ತವಾದ ಬಿಡಿವಿವರಗಳು ನಮಗೆ ಬೇಕಾದರೆ ದಿನಚರಿಯ ಸಾಹಿತ್ಯಕ್ಕೇ ಶರಣು. ದಿನಚರಿಯಲ್ಲಿ ವಿಷಯವೇ ಅತಿ ಮುಖ್ಯ. ಈ ರೀತಿ ಎರಡನೆಯದು ಮಾತ್ರ. ಆದರೂ ಉತ್ಕøಷ್ಟ ರೀತಿಗೆ ತನ್ನದೇ ಆದ ವೈಯಕ್ತಿಕತೆಯೂ ಸೊಬಗೂ ಮನೋಹರತ್ವವೂ ಇದ್ದೇ ಇದೆ. ಸ್ವೀಫ್ಟ್, ಪೀಪಿಸ್, ಜಾನ್ ಈವೆಲಿನ್ ಇತ್ಯಾದಿ ಕೆಲವರ ದಿನಚರಿಗಳು ಮರೆಯಲಾಗದ ಕೃತಿಗಳು.

ಪೀಪಿಸ್ ಒಂದು ಬಗೆಯ ಶೀಘ್ರ ಲಿಪಿ ಮತ್ತು ಒಂದು ಗುಪ್ತಲಿಪಿ ಎರಡನ್ನೂ ಬಳಸಿಕೊಂಡು ತನ್ನ ದಿನಚರಿ ತಯಾರಿಸಿದ. ನೂರೈವತ್ತು ಸಂವತ್ಸರದ ತರುವಾಯ ಅದನ್ನು ಮೂರು ವರ್ಷ ಹೆಣಗಾಡಿ ಅರ್ಥವಾಗುವ ಆಂಗ್ಲಭಾಷೆ ತರ್ಜುಮೆ ಮಾಡಿದರು. ಈವೆಲಿನ್ನನ ದಿನಚರಿ ಬಲುದಿನ ಕಣ್ಮರೆಯಾಗಿದೆ. ಇನ್ನೇನು ಒಲೆಹೊತ್ತಿಸುವುದಕ್ಕೆ ಇಂಧನವಾಗಿ ಬಿಡುವ ಘಳಿಗೆಯಲ್ಲಿ ಅತಿಥಿಯಾಗಿದ್ದ ಒಬ್ಬನ ಹಠಾತ್ ಕುತೂಹಲದ ಉಳಿದು ಬಂತು.

ಇನ್ನು ಕೆಲವು ಉದಾಹರಣೆಗಳು : (ಚಿ) ಸ್ವಿರ್ಫಟ್‍ನಿಂದ: `ಆ ಅಡ್ಡಕಸಬಿ ನಿನ್ನನ್ನು ಸೋಲಿಸಿದಳೇ? ಛಿ ಸ್ಟೆಲ್ಲಾ, ನಾಚಿಕೆಯಿಲ್ಲವೇ ನಿನಗೆ? ಹೋಗಲಿ, ಈ ಸಲ ಮನ್ನಿಸಿದ್ದೇನೆ; ಮುಂದೆಂದೂ ಸೋಲಕೂಡದು ಕೂಊಊಊಡದು. ನಾನಿನ್ನು ಮಲಗಿಕೊಳ್ಳುತ್ತೇನೆ. ಗುಡ್ ನೈಟ್, ನನ್ನ ಸ್ವಂತದ ಪುಟ್ಟ ಮದ್ದು ಧಿಕ್ಕರಿಸುವುದಿಟ್ಟ ಷಟಿಂಗರೆ! ಕೊನೆಯ ಪಂಕ್ತಿಯ ಕೊನೆಯ ಉದ್ದ ಶಬ್ದವನ್ನು ಓದಿದಿರಾ? ಇಲ್ಲ, ನಿಮಗೆ ಓದುವುದಕ್ಕಾಗುವುದಿಲ್ಲ.' ಇವೊತ್ತು ಡಾ. ಕಾಕ್ಬರ್ನ್ ಜೊತೆ ಭೋಜನಮಾಡಿದೆ. ಇನ್ನೊಂದು ಸಾರಿ ಹಾಗೆ ಮಾಡುವುದಕ್ಕೆ ನಾನು ಆತುರ ಪಡುವುದಿಲ್ಲ. ಅವನೊಂದಿಗೆ ಸ್ಕಾಚ್ ಜನರ ತಂಡ ಇರುತ್ತದೆ. `ನನ್ನ ಹಣದ ಚೀಲವನ್ನು ನೂಲುಕಾಲುಚೀಲದಲ್ಲಿ ಬಚ್ಚಿಟ್ಟು ತಲೆದಿಂಬಿಗೂ ಗೋಡೆಗೂ ಮಧ್ಯ ಅವಿತಿಡುತ್ತೇನೆ. ಕಳ್ಳರ ಹಾವಳಿ ಇದೆ. (b) ಈವೆಲಿನ್‍ನಿಂದ: ಘನವಾದ ಒಂದು ತೇಜಿಯನ್ನು ಸರಪಣಿಯಿಂದ ಕಟ್ಟಿಹಾಕಿ ಅದರ ಮೇಲೆ ನಾಯಿಗಳನ್ನು ಛೂ ಬಿಟ್ಟರು. ಅದು ಒಂದನ್ನೂ ಹತ್ತಿರ ಬಾರದಂತೆ ಓಡಿಸಿತು. ಕ್ರೂರವಾದಷ್ಟು ಆಟ ಅದು. ತೇಜಿ ಒಬ್ಬನನ್ನು ಸಾಯಿಸಿತು ಎಂಬ ನೆವ ಇಟ್ಟುಕೊಂಡು ಅದನ್ನು ಕತ್ತಿಗಳಿಂದ ಇರಿದು ಕೊಲ್ಲುತ್ತಾರಂತೆ ನಾನಂತೂ ಅದನ್ನು ನೋಡಲಾರೆ. `ಸಿಡುಬು ಬಹುವಾಗಿ ಹರಡಿದೆ; ಮಾರಕ. ತೇಮ್ಸ್ ಹೆಪ್ಪುಗಟ್ಟಿದೆ.' ಬಾಂಬ್ಸ್ ಎಂಬ ಹೆಸರಿನ ಆ ಪೈಶಾಚಿಕ ಕತ್ಯಾಕಾರೀ ಕೇಡಿಗ ಯಂತ್ರಗಳ ಪ್ರಯೋಗವನ್ನು ನೋಡಿದೆ; ಸಣ್ಣ ಫಿರಂಗಿಯಿಂದ ಅದನ್ನು ಹಾರಿಸಿದರು. ಅವು ಎಗರುವ ದೂರವೂ ಬಿದ್ದ ಜಾಗದಲ್ಲಿ ಅವು ಉಂಟುಮಾಡುವ ವಿನಾಶವೂ ಅಗಾಧ.' ` ಈಗ ಹೊಸ ಛಾಪಾ ಆಗಲಾರಂಭವಾಗಿದೆ.' ` ಇವೊತ್ತು ನನ್ನ 85ನೆಯ ವಯಸ್ಸಿನ ಪ್ರಾರಂಭ. ಉಳಿದಿರುವ ದಿವಸಗಳನ್ನು ವಿವೇಕದಿಂದ ಕಳೆಯುವಂತೆ ದೇವರು ನನ್ನನ್ನು ಬೋಧಿಸಲಿ.' (ಛಿ) ಪೀಪಿಸ್‍ನಿಂದ : `ನನ್ನ ಕಚೇರಿಯ ಬಳಿ ಕ್ಯಾಪ್ಟನ್ ಗ್ರೂಪ್ ನನಗೊಂದು ಲಕೋಟೆ ಕೊಟ್ಟ. ಅದರಲ್ಲಿ ದುಡ್ಡು ಇರುವುದು ನನಗೆ ಗೊತ್ತು. ಲಕೋಟೆ ಒಡೆದು ಒಳಗಿದ್ದದನ್ನೆಲ್ಲ ಮೇಜಿಗೆ ಸುರಿದೆ, ಅತ್ತಕಡೆಗೆ ಕಣ್ಣು ತಿರುಗಿಸಿದೆ. ಯಾವಾಗಲಾದರೂ ನನ್ನನ್ನು ಪ್ರಶ್ನೆಮಾಡಿದ್ದರೆ ಲಕ್ಕೋಟೆಯಲ್ಲಿ ದುಡ್ಡನ್ನು ನಾನು ನೋಡಲೇ ಇಲ್ಲ ಎಂದು ಹೇಳಿಬಿಡಬಹುದು. ' ನನ್ನ ಪತ್ನಿ ನೀಲಿ ಲಂಗ ಮೇಲಿರುವ ಎಗ್ಗ ಉಡುಪನ್ನು ಧರಿಸುತ್ತ ವಿಲಂಬ ಮಾಡಿದಳು, ನನಗೋ ಹಸಿವು. ಹಸಿವಾಗಿದ್ದಾಗ ನಾನು ಸಿಡುಕ. ಕೋಪಗೊಂಡೆ.' `ಬಹಳ ಕಷ್ಟಪಟ್ಟು ಬೆಟಿ ಟರ್ನರ್ ಹಾಡುವಂತೆ ಮಾಡಿದೆ. ಅವಳಿಗೆ ಶ್ರುತಿಬದ್ಧವಾಗಿ ಒಂದು ಸ್ವರ ಹಾಡುವುದಕ್ಕೂ ಬರುವುದಿಲ್ಲ. ನನ್ನ ಹೆಂಡತಿಗಿಂತ ಸಾವಿರ ಪಾಲು ಕೀಳು ಅವಳ ಸಂಗೀತ; ಆದರಿಂದ ನನಗೆ ಸಮಾಧಾನ.' `ಒಂದು ಜೊತೆ ಕೈಚೀಲ ಕೊಳ್ಳಲು ಡಾಲ್ ಬಳಿಗೆ ಹೋದೆ. 20 ಷಿಲಿಂಗ್ ಕೊಟ್ಟೆ. ಅವಳು ಬಲು ಚೆಲುವೆ; ಅಷ್ಟು ಮೊಬಲಗು ಹೆಚ್ಚಲ್ಲ.' `ಪ್ರಭುದಿವಸ, ಭೋಜನ, ಆಮೇಲೆ ಪುನಃ ಉಪದೇಶ ಭಾಷಣ. ನಾ ನಿದ್ರಿಸಿದೆ. ದೇವರು ಕ್ಷಮಿಸಲಿ;'
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ